ಕರಡಿ ಮನೆ ಹಿಂಬಾಗಿಲಿಗೆ ಕಲ್ಲೆಸತ!

ಕರಡಿ ಮನೆ ಹಿಂಬಾಗಿಲಿಗೆ ಕಲ್ಲೆಸತ!

ನಾನಾ ಅವರದು ತುಂಬಿದ, ಅವಿಭಕ್ತ ಕುಟುಂಬ. ಹೆಂಡತಿ ಶಕ್ಕು, ಎರಡು ಹೆಣ್ಣು ಮಕ್ಕಳು, ಒಂದು ಗಂಡು ಮಗು, ಅವಿವಾಹಿತ ನಾದಿನಿ, ಹೆಂಡತಿಯ ಅಪ್ಪ, ಅಣ್ಣನ ಮಗ ಹಾಗು ಮಗಳು, ಇನ್ನೊಬ್ಬ ನಾದಿನಿಯ ಮಗ ಹಾಗೂ ದೂರದ ತಮ್ಮ ಮೇಲಾಗಿ ಬಾಲ್ಯದ ಆತ್ಮೀಯ ಗೆಳೆಯನ ಮಗ ಇವರೆಲ್ಲರೂ ಕೂಡಿ ಒಂದೇ ಮಲಗುವ ಕೋಣೆ ಇದ್ದ ಸಣ್ಣ ಮನೆಯಲ್ಲಿ ವಾಸವಿದ್ದರು. ಕುಟುಂಬ ದೊಡ್ಡದಾಗುತ್ತಿದ್ದ ಕಾರಣ ಈಗಷ್ಟೇ ಮನೆಯನ್ನು ವಿಸ್ತರಿಸಿ, ಎರಡು ಮಲಗುವ ಕೋಣೆ ಹಾಗೂ ಒಂದು ಮಹಡಿ ಕೋಣೆ ಕಟ್ಟಿಸಿದ್ದರು. ಮಗ ಓಚವ ಹಾಗು ನಾದಿನಿಯ ಮಗ ಧಡಿಯ ಮಹಡಿ ಕೋಣೆಯಲ್ಲಿ ಮಲಗುತ್ತಿದ್ದರು. ಮಹಡಿ ಮೇಲೆ ಇನ್ನೂ ಸಣ್ಣ ಪುಟ್ಟ ಮನೆ ಕೆಲಸ ನಡೆಯುತ್ತಾ ಇತ್ತು.

ಅವರ ಹಿಂದಿನ ಮನೆಯಲ್ಲಿ ಕರಡಿ ಹಾಗೂ ಹೆಂಡತಿ ಬೆತ್ಲೆಹಮ್ (Bethlehem) ವಾಸ ಮಾಡುತ್ತಿದ್ದರು. ಕರಡಿಗೆ ಆ ಅನ್ವರ್ಥನಾಮ ಅವರು ಆ ಪ್ರಾಣಿಯನ್ನು ತುಂಬಾ ಹೋಲುತ್ತಿದ್ದ ಕಾರಣ ಬಂದಿತ್ತು. ಕರಡಿಗಪ್ಪು ಬಣ್ಣ, ದಾಪುಗಾಲು ನಡಿಗೆ, ಕೆದರಿದ ಗುಂಗುರು ಕೂದಲು…

ಇನ್ನು ಬೆತ್ಲೆಹಮ್ – ಪಾಪ ಸೀರೆ, ಲಂಗ ನೆನೆಯಬಾರದು ಎಂದು ಅವನ್ನು ಆದಷ್ಟು ಮೇಲೆ ಸಿಗಿಸಿಕೊಂಡು ಬಟ್ಟೆ ಒಗೆಯುತ್ತಾ ಬೆತ್ಲೆ ನಾವು (ಹಿಂದಿಯ ಹಮ್) ಎಂದು ಈ ರೀತಿ ಅವರು ಪರೋಕ್ಷವಾಗಿ ತೋರ್ಪಡಿಸಿದ್ದು ನಮಗೆ ಆ ಹೆಸರಿಡಲು ಪ್ರೇರೇಪಿಸಿತ್ತು! ಹೋಗಲಿ ಬಿಡಿ, ಈ ಕಥೆಗೂ ಬೆತ್ಲೆಹಮ್ ಅವರಿಗೂ ಯಾವ ಸಂಬಂಧವೂ ಇಲ್ಲ.

1981ರ ಬೇಸಿಗೆ ಸಮಯದ ಒಂದು ಹುಣ್ಣಿಮೆಯ ರಾತ್ರಿ, ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ಒದುತ್ತಿದ್ದ ಓಚವ ಹಾಗು ಧಡಿಯ ಓದುವ ಕಾರ್ಯಕ್ರಮ ಮುಗಿಸಿ ಮಹಡಿ ಕೋಣೆಯ ಸೆಖೆ ತಾಳಲಾರದೇ ಮಹಡಿ ಮೇಲೆ ಗಾಳಿ ಸೇವನೆಗೆಂದು ಅಡ್ಡಾಡ್ಡುತ್ತಿದ್ದರು. ಹಿಂದಿನ ಕರಡಿಯ ಮನೆಯಲ್ಲಿ ಯಾರೂ ಇದ್ದ ಹಾಗೆ ಇರಲಿಲ್ಲ ಎಂದು ತಮ್ಮಲ್ಲೇ ಮಾತಾಡಿಕೊಂಡರು. ಅಲ್ಲಿ ಬಿದ್ದಿದ್ದ ಜಲ್ಲಿ ಕಲ್ಲುಗಳ ಮೇಲೆ ಹೇಗೋ ಅವರ ಗಮನ ಬಿತ್ತು. ಅದ್ಯಾಕೋ ಏನೋ ಇಬ್ಬರೂ  ಜಲ್ಲಿಕಲ್ಲುಗಳನ್ನು ಹೆಕ್ಕಲು ಶುರು ಮಾಡಿದರು. ಆಮೇಲೆ “ಬಾಗಿಲು, ಬಾಗಿಲು” ಎಂದರು. ತಡ ಮಾಡದೇ ಸರದಿ ಪ್ರಕಾರ ರೊಯ್ಯೆಂದು ಕಲ್ಲುಗಳನ್ನು ಕರಡಿ ಮನೆ ಹಿಂಬಾಗಿಲಿಗೆ ಬೀಸಿದ್ದೇ ಬೀಸಿದ್ದು. ಘಟೋತ್ಕಚನ ಮೇಲೆ ಕೌರವರು ಬಾಣವರ್ಷ ಮಾಡಿದ ಹಾಗೆ. ಘಟೋತ್ಕಚನಂತಿದ್ದ ಬಾಗಿಲು ಹಾಗೇ ನಿಂತಿತ್ತು. ಕಲ್ಲು ಬೀಸಿ ಖುಷಿ ಪಟ್ಟು, ಸಾಕೆನ್ನಿಸಿದ ಮೇಲೆ ಒಂಟಿ ಮಹಡಿ ಕೋಣೆಯಲ್ಲಿ ಇಬ್ಬರೂ ಎಂದಿನಂತೆ ಮಲಗಿದರು.

ಸರಿ, ಮಾರನೇ ದಿನ ಬೆಳಗ್ಗೆ ಆಯಿತು, ರಾತ್ರಿನೂ ಆಯಿತು. ಓಚವ ಹಾಗು ಧಡಿಯ ಮಹಡಿ ಮೇಲೆ ಮತ್ತೆ ಗಾಳಿ ಸೇವನೆಗೆ ಬಂದರು. ಸ್ವಾಭಾವಿಕ ಸಂಪ್ರದಾಯವೋ ಏನೋ ಎಂಬಂತೆ ಜಲ್ಲಿಕಲ್ಲು ಜೋಡಿಸಿಕೊಂಡು ಬೀಸಿದ್ದೇ ಬೀಸಿದ್ದು. ಟಲ್! ಫೇಡ್! ಧಡ್! ಟಲ್! ಜಲ್ಲಿಕಲ್ಲು ಖಾಲಿ. ಆದರೆ ಮೋಜು ಸಾಕಾಗಿರಲಿಲ್ಲ. ಸರಿ, ಅರ್ಧ ಕಟ್ಟಿದ್ದ, ಗಾರೆ ಕೆಲಸ ಮುಗಿಸದೇ ಇದ್ದ ಒಂದು ಗೋಡೆಯ ಅರ್ಧ ಇಟ್ಟಿಗೆ ಕಿತ್ತು, ಮುರಿದು ಮತ್ತೆ ಶುರು. ಧಡ್! ಥಡ್! ಟೊಳ್! ಧಮ್! ತೃಪ್ತಿಯ ಭಾವನೆಯಿಂದ ನಿನ್ನೆಯಂತೆ, ಅಂದೂ ಮಲಗಿಕೊಳ್ಳಲು ಕೋಣೆಗೆ ವಾಪಸ್ಸು ಬಂದರು.

ಮಲಗಿ ಎರಡು ಮೂರು ನಿಮಿಷ ಆಗಿರಬಹುದು. ಸಮಯ್ಯ! ಸಮಯ್ಯ! ನಾನಾ ಮನೆ ಬಾಗಿಲು ಬಡಿಯುವ ಸದ್ದು. ಓಚವ ಕೂಗಿದ – “ಏ! ಇದು ಸಮಯ್ಯ ಮನೆ ಅಲ್ಲ, ಉಗ್ರನರಸಿಂಹಯ್ಯನವರ ಮನೆ”. ಕಿಟಕಿಯಲ್ಲಿ ಕುತೂಹಲದಿಂದ ಯಾರೂ? ಎಂದು ನೋಡಿ ಇಣುಕಿ ಬೆಚ್ಚಿದ! ಮನೆ ಮುಂದೆ ಕರಡಿ. ಥಟ್ ಎಂದು ವಿದ್ಯುತ್ ದೀಪ ಆರಿಸಿ, ಧಡಿಯ, ಓಚವ ಇಬ್ಬರೂ ಮಲಗಿರುವ ನಾಟಕ ಶುರು ಮಾಡಿದರು. ಕೆಳಗಿನ ಕೈಸಾಲೆಯಲ್ಲಿ ನಾನಾ ಹಾಗು ಕರಡಿ. ಕರಡಿ ಜೋರು ದನಿಯಲ್ಲಿ “ಸಮಯ್ಯ, ನಿಮ್ಮ ಮಕ್ಕಳು ನಮ್ಮ ಮನೆ ಹಿಂದಿನ ಬಾಗಿಲಿಗೆ ರಪ-ರಪ ಕಲ್ಲು ಹೊಡೀತಾ ಇದ್ದಾರೆ! ಅವರಿಗೆ ಸರಿಯಾದ ಶಿಕ್ಷೆ ಕೊಡಿ! ಅವರಿಗೆ ಬುದ್ಧಿ ಸರಿ ಇಲ್ವಾ?” ನಾನಾ ಮಕ್ಕಳನ್ನು ಕರೆಯಿಸಿ “ಏನ್ರಪ್ಪ, ಇವರ ಮನೆಗೆ ಕಲ್ಲು ಹೊಡೀತಿದ್ರಾ? ಕಣ್ಣುಜ್ಜಿಕೊಂಡು ಮಕ್ಕಳು ಮುಗ್ಧ, ಮಂಪರು ಧ್ವನಿಯಲ್ಲಿ “ಇಲ್ಲಪ್ಪ, ನಾವು ಓದು ಮುಗಿಸಿ ಆಗಲೇ ನಿದ್ದೆ ಮಾಡ್ತಿದ್ವಿ”. ಇನ್ನೊಬ್ಬ ದನಿಗೂಡಿಸಿದ “ಹೌದೌದು, ಮಲಗಿದ್ವಿ”. ನಾನಾ ಕರಡಿಗೆ ಶಾಂತ ಧ್ವನಿಯಲ್ಲಿ “ನೋಡಿ, ನಮ್ಮ ಮಕ್ಕಳು ತುಂಬ ಒಳ್ಳೆಯವರು. ಈ ರೀತಿ ಕೆಟ್ಟ ಚೇಷ್ಟೆ ಖಂಡಿತಾ ಕನಸಲ್ಲೂ ಮಾಡುವುದಿಲ್ಲ. ಹೀಗೆಲ್ಲಾ ಸುಮ್ಮ-ಸುಮ್ಮನೆ ದೂಷಣೆ ಮಾಡಬೇಡಿ. ದಯವಿಟ್ಟು ಹೋಗಿ ಮಲಗಿ. ರಾತ್ರಿ ತುಂಬಾ ಹೊತ್ತಾಗಿದೆ. ನಾಳೆ ನೋಡೋಣ”. ಕರಡಿ ಗೊಣಗಿಕೊಂಡು, ಬೈಕೊಂಡು, ಏನೋ ಕೈ-ಸನ್ನೆಗಳನ್ನು ಮಾಡಿಕೊಂಡು ಅಸಮಾಧಾನದಿಂದಲೇ ತನ್ನ ಮನೆ ಸೇರಿತು!

ಮರುದಿನ ಏನಾಗುತ್ತೋ ಎಂಬ ದುಗುಡದಲ್ಲೇ ಓಚವ ಧಡಿಯ ಪೂರಾ ದಿನ ಕಳೆದರು. ಅವರಿಗೆ ಶಕ್ಕು ಅಮ್ಮನಿಗೆ ಖಂಡಿತ ಈ ವಿಷಯದ ಬಗ್ಗೆ ಅನುಮಾನ ಬಂದಿದೆ ಅಂತ ಅನ್ನಿಸಿತ್ತು. ಆದರೆ ಅವರ ಅದೃಷ್ಟಕ್ಕೆ ಮನೆಯಲ್ಲಿ ಎಲ್ಲರೂ ಅವರವರ ದೈನಂದಿನ ಕಾರ್ಯಗಳಲ್ಲಿ ಮಗ್ನರಾಗಿದ್ದು ಯಾರಿಗೂ ಈ ವಿಚಾರ ತಲೆಗೆ ಬರಲಿಲ್ಲ. ಕರಡಿ ಕೂಡಾ ಯಾಕೋ ಏನೋ ಮತ್ತೆ ಇದರ ವಿಚಾರ ಎತ್ತಲಿಲ್ಲ (ಊರಿಗೆ ಹೋಗಿದ್ದ ಬೆತ್ಲೇಹಮ್ ಅಂದೇ ವಾಪಸ್ಸು ಬಂದಿರಬಹುದು!). ಇವರೂ ಚಕಾರ ಎತ್ತದೆ ಆ ವಿಚಾರದಲ್ಲಿ ಏನೂ ಆಗದೇ ಇರುವ ಹಾಗೆ ತಮ್ಮಷ್ಟಕ್ಕೆ ತಾವೇ ಸುಮ್ಮನಿದ್ದು ಬಿಟ್ಟರು. ಆ ಪ್ರಸಂಗ ಅಲ್ಲಿಗೇ ಕೊನೆಗೊಂಡಿತು. ನಡೆದ ಸನ್ನಿವೇಶ ನಿಜ ಎಂದು ವರ್ಷಾನುಗಟ್ಟಲೆ ಯಾರಿಗೂ ಹೇಳಲೇ ಇಲ್ಲ.

ಕೊನೆಗೆ ಓಚವನಿಗೆ ಕೆಲಸ ಸಿಕ್ಕಿ, ಸ್ನೇಹಿತರ ಜೊತೆ ಗೋವಾದ ಪ್ರವಾಸದಿಂದ ತಂದಿದ್ದ ಒಂದು ಪೋರ್ಟ್ ವೈನ್ ಬಾಟಲಿಯನ್ನು ನಾನಾಗೆ ಕೊಟ್ಟು, ಧಡಿಯ ಹಾಗೂ ಓಚವ ಈ ಹಳೆಯ ಪ್ರಸಂಗದ ಸಂಪೂರ್ಣ ವಿವರಗಳನ್ನು ನೀಡಿದಾಗ ನಾನಾ ಕೇಕೆ ಹಾಕಿ ನಗುತ್ತಾ ಬೈದಿದ್ದೋ “ಥೂ! ತಿಂದು ಕುಕ್ಕುರಿಸುತ್ತಿತ್ತೇನ್ರೋ ಬಡ್ಡಿ ಮಕ್ಕಳಾ!”

-ಓಚವ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.