Music Teacher’s Suvega/ಸಂಗೀತ ಮೇಷ್ಟ್ರ ಸುವೇಗಾ

ಸಂಗೀತ ಮೇಷ್ಟ್ರ ಸುವೇಗಾ

ಭಾರತದಲ್ಲಿ 1970-80ರ ದಶಕದಲ್ಲಿ ಬೈಸಿಕಲ್ಲು ಬಿಟ್ಟರೆ ಮೊಪೆಡ್ ಬಹಳ ಜನಪ್ರಿಯ. ಪ್ರಸಿದ್ಧವಾದ ಕೈನೆಟಿಕ್ ಲೂನ, ಟಿ.ವಿ.ಎಸ್., ಜೊತೆಗೆ ಇತರ ಮೊಪೆಡುಗಳು ಎಂದರೆ ಎನ್‌ಫೀಲ್ಡ್ ಮೋಫಾ, ಸ್ಪೋರ್ಟಿಫ್, ಹೀರೋ ಮೆಜೆಸ್ಟಿಕ್, ವೆಸ್ಪಾ ಸಿಯಾವ್ ಹಾಗೂ ಸುವೇಗಾ. ಅತ್ಯಂತ ಕನಿಷ್ಠ ಖರ್ಚಿನಲ್ಲಿ ಓಡುವಂತೆ ಇವುಗಳನ್ನು ವಿನ್ಯಾಸ ಮಾಡಲಾಗಿ 40-50 ಸಿಸಿ ಇರುತ್ತಿದ್ದ ಪೆಟ್ರೋಲ್ ಎಂಜಿನ್ ಇರುವ ವಿಷಯ ಬಿಟ್ಟರೆ ಹೆಚ್ಚು ಕಡಿಮೆ ಬೈಸಿಕಲ್ಲು ಮಾದರಿಯೇ ಆಗಿರುತ್ತಿದ್ದವು – ಕೂರಲು ಅದೇ ಬೈಸಿಕಲ್ಲು ಆಸನ, ಹಿಂದೆ ಲಗೇಜ್/ಕೂರುವ ಸ್ಟ್ಯಾಂಡ್,– ಕೆಲವಕ್ಕೆ ಹಾರ್ನ್ ಇಲ್ಲ, ಬದಲಿಗೆ ಸೈಕಲ್ ಬೆಲ್, ಶಾಕ್ ಅಬ್‌ಸಾರ್ಬರ್ ಇಲ್ಲ, ಚಕ್ರಗಳಿಗೆ ಸ್ಪೋಕ್ಸ್, ಪುಣ್ಯಕ್ಕೆ ಹೆಡ್ ಲೈಟ್ ಇರುತ್ತಿತ್ತು. ಹಿಂದೆ ಲೈಟ್ ಇಲ್ಲ, ಕೆಂಪು ರಿಫ್ಲೆಕ್ಟರ್ ಮಾತ್ರ. ಮತ್ತೆ ಎಂಜಿನ್ನಿಗೂ ಕವರ್ ಇಲ್ಲ, ಪೆಟ್ರೋಲ್ ನಳಿಗೆ, ಸ್ಪಾರ್ಕ್‌ಪ್ಲಗ್ ಎಲ್ಲಾ ಬಹಿರಂಗವಾಗಿ ಕಾಣುತ್ತಿದ್ದವು. ಬೈಸಿಕಲ್ಲು ರೀತಿ ಪೆಡಲ್ ಕೂಡ – ಇಂಜಿನ್ ಶುರು ಮಾಡಲು ಸೆಂಟರ್-ಸ್ಟ್ಯಾಂಡ್ ಹಾಕಿ ಜೋರಾಗಿ ಐದಾರು ಬಾರಿ ಪೆಡಲ್ ಎಡಗೈನ ಲೇವರ್ ಹಿಡಿದೂ/ಬಿಟ್ಟೂ ತುಳಿಯಬೇಕು – ಇದು ವ್ಯವಸ್ಥೆ. ಪೆಟ್ರೋಲ್ ಏನಾದರೂ ಖಾಲಿಯಾದರೆ ಪೆಡಲ್ ತುಳಿದುಕೊಂಡು ಮುಂದೆ ಕೂಡಾ ಹೋಗಬಹುದಿತ್ತು. ಆ ಕಾಲಮಾನದಲ್ಲಿ ಲೂನ ಅವಿಷ್ಕಾರಕರಾದ ಎನ್.ಕೆ. ಫಿರೋದಿಯಾ ಮತ್ತಿತರ ಈ ನಾವೀನ್ಯ ಕೊಡುಗೆಗಳು ಭಾರತೀಯ ವಾಹನಗಳ ನಿರ್ಮಾಣ ಹಾಗೂ ಉದ್ಯೋಗಶೀಲತೆಯ ದೃಷ್ಟಿಯಿಂದ ನೋಡಿದಾಗ ನಿಜಕ್ಕೂ ಶ್ಲಾಘನೀಯ. ಸುವೇಗಾ ಫ್ರಾನ್ಸ್ನ ಮೋಟೋಬಿಕೇನ್ (Motobecane) ತಂತ್ರಜ್ಞಾನದ ಸಹಾಯದಿಂದ ತಿರುಪತಿಯಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಶಾಕ್ (shock absorbers) ಅಬ್ಸಾರ್ಬರ್ಸ್ ಇಲ್ಲವೇ ಇಲ್ಲ.  ಹಿಂಭಾಗಕ್ಕೆ ಸ್ಪ್ರಂಗ್-ಸೀಟ್ ಸಸ್ಪೆನ್ಷನ್ (Sprung-seat suspension). ಮುಂಭಾಗದ ಫೋರ್ಕ್ ಗಳಿಗೆ ಸರಳ ಗ್ರೀಸ್ಡ್ ಸ್ಪ್ರಿಂಗ್ ಸಸ್ಪೆನ್ಷನ್ (simple greased-spring suspension for front-forks).

ರಾಜೂ ಮನೆಗೆ ಸಂಗೀತ ಹೇಳಿ ಕೊಡಲು ನಮ್ಮ ಸಂಗೀತ ಮೇಷ್ಟ್ರು ಸುಮಾರು ಒಂದು ಮೈಲಿ ದೂರದಿಂದ ತಮ್ಮ ಸುವೇಗಾ ಮೊಪೆಡ್ ಗಾಡಿಯಲ್ಲಿ ಬರುತ್ತಿದ್ದರು. 40 ದಾಟಿದ ವಯಸ್ಸು, ಹೊಂಬಣ್ಣ, ಸಣ್ಣ ಶರೀರ, ಸ್ವಲ್ಪ ಉಬ್ಬಿದ ಹಲ್ಲು, ಗಂಧದ ನಾಮ, ಪಂಚೆ, ಶರಟು, ವೈರ್ ಬ್ಯಾಗಿನಲ್ಲಿ ಸಂಗೀತದ ಪುಸ್ತಕಗಳು, ಒಳ್ಳೆಯ ಕರ್ನಾಟಕ ಸಂಗೀತ ಗಾಯಕರು. ರಾಜೂ, ಅವರ ಅಕ್ಕ ಇಬ್ಬರಿಗೂ ಅವರಿಂದ ಸಂಗೀತ ಪಾಠ. ಸಾಮಾನ್ಯವಾಗಿ ರಸ್ತೆಯಲ್ಲಿ ಕ್ರಿಕೆಟ್ ಅಥವಾ ಬೇರೇನೋ ಆಡಿಕೊಂಡು ಕಾಲಹರಣ ಮಾಡುತ್ತಿದ್ದ ನಾವು ಇವರು ಬಂದ ಮೇಲೆ ಒಂದು ಕಣ್ಣು ರಾಜೂ ಮನೆ ಕಡೆಗೇ ಇಟ್ಟಿರುತ್ತಿದ್ದೆವು.  ಅವರ ಸಂಗೀತ ಪಾಠ ಶುರು ಆಗಿ 15-20 ನಿಮಿಷ ಆದ ಮೇಲೆ, ಯಾರೂ ಇಲ್ಲದಿರುವುದನ್ನು ಖಾತರಿ ಮಾಡಿಕೊಂಡು ಮೊಪೆಡ್ ಕಿತಾಪತಿ ರಿಪೇರಿ ಶುರು!

ಸುವೇಗಾ ಟೈರು ಗಾಳಿ ಬಿಟ್ಟುಬಿಡುವುದು ನಮಗೆ ಅತೀ ಸುಲಭದ ಕೆಲಸ. ಮೇಷ್ಟ್ರು ಆಚೆ ಬಂದ ಮೇಲೆ ಅಯ್ಯೋ ಪಂಕ್ಚರ್ ಆಗಿರಬೇಕು ಎಂದು ಪರಿಣತರ ರೀತಿ ವಾಖ್ಯೆ ಕೊಡುವುದು. ಅವರು ಪಾಪ ತಳ್ಳಿಕೊಂಡು ಹೋಗುವುದನ್ನು ನೋಡಲಾರದೆ ರಾಜೂ ಪಂಕ್ಚರ್ ಅಂಗಡಿಗೆ ತಳ್ಳಿಕೊಂಡು ಹೋದರೆ ನಮಗೆ ಖುಷಿ. ಇನ್ನೊಂದು ದಿನ  ಸ್ಪಾರ್ಕ್ ಪ್ಲಗ್ ವೈರ್ ಸಂಪರ್ಕ ತೆಗೆಯುವುದು. ಮೇಷ್ಟ್ರು ಸೆಂಟರ್ ಸ್ಟ್ಯಾಂಡ್ ಹಾಕಿ ಜೋರಾಗಿ ಪೆಡಲ್ ಮಾಡುತ್ತಿದ್ದರೆ ಮರೆಯಲ್ಲಿ ನಿಂತು ತಮಾಷೆ ನೋಡುವುದು. ಅವರು ಕೊನೆಗೆ ಪೆಟ್ರೋಲ್ ಪರೀಕ್ಷಿಸಿ, ಪೆಟ್ರೋಲ್ ಖಾಲಿ ಆಗಿಲ್ಲವಲ್ಲ ಅಂತ ತಲೆ ಕೆಡಿಸಿಕೊಳ್ಳುವುದು, ಕೊನೆಗೆ ಸೆಂಟರ್ ಸ್ಟ್ಯಾಂಡ್ ತೆಗೆದು ಪೆಡಲ್ ತುಳಿದುಕೊಂಡು ಹೋಗುವುದನ್ನು ನೋಡಿದರೆ ನಗುವುದು. ಮತ್ತೊಂದು ದಿನ ಸ್ಪಾರ್ಕ್ ಪ್ಲಗ್ ಬಿಚ್ಚಿಟ್ಟುಕೊಳ್ಳುವುದು ಅಥವಾ ಚೈನ್ ಅನ್ನು ಸ್ಪ್ರಾಕೆಟ್‍ನಿಂದ ಕಳಚಿ ಬಿಡುವುದು. ಮಗದೊಂದು ದಿನ ಪೆಟ್ರೋಲ್ ನಳಿಗೆ ಬಿಚ್ಚಿಬಿಡುವುದು. ಪೆಟ್ರೋಲ್ ನಿಯಂತ್ರಕ ತೆರೆದ ತಕ್ಷಣ ಪೆಟ್ರೋಲ್ ಸೋರಿ ಹೋಗುವುದನ್ನು ನೋಡಿ ಆನಂದಿಸುವುದು. ಇಷ್ಟೆಲ್ಲಾ ಶ್ರೀ ಕೃಷ್ಣ ಕೂಡಾ ಮಾಡದೇ ಇದ್ದ ನಮ್ಮ ಬಾಲ್ಯ ಚೇಷ್ಟೆಗಳು. ಪಾಪ ರಾಜೂಗೆ ಇವೆಲ್ಲ ಗೊತ್ತಾದರೂ ಗೆಳೆಯರಿಗೆ ಏನೂ ಹೇಳಲಾರದ ಅಸಹಾಯಕತೆ. ಹೀಗೇ ಸುಮಾರು 1-2 ತಿಂಗಳು ನಮ್ಮ ದೆಸೆಯಿಂದ ಮೇಷ್ಟ್ರು ಕಷ್ಟ ಅನುಭವಿಸಿದರು. ಬರ್ತಾ ಬರ್ತಾ ಮೇಷ್ಟ್ರು ಕೂಡಾ ಇವೆಲ್ಲ ಸಣ್ಣ ಪುಟ್ಟ ಚಳಕಗಳನ್ನೆಲ್ಲಾ ಕಲಿತುಕೊಂಡರು. ನಾವು ಏನು ಮಾಡಿದ್ದೀವಿ ಎಂದು ಕಂಡು ಹಿಡಿಯುತ್ತಿದ್ದರು, ತಾವೇ ಸರಿ ಪಡಿಸಿಕೊಳ್ಳುವಷ್ಟು ನಿಪುಣರಾದರು. ಅದೇನೇ ಆದರೂ ಯಾರಿಗೂ ದೂರದೇ ನಗುಮೊಗದಿಂದ, ಒಮ್ಮೊಮ್ಮೆ ಪೆಚ್ಚುಮುಖದಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದರು. ರಾಜೂ ಕೂಡಾ ಬಂದು ಇವನ್ನೆಲ್ಲ ದಯವಿಟ್ಟು ಮಾಡಬೇಡಿ ಎಂದು ನಮ್ಮಲ್ಲಿ ಬೇಡಿಕೊಳ್ಳುತ್ತಿದ್ದ. ಕೊನೆಗೆ ನಮಗೂ ಮೇಷ್ಟ್ರ ಮೇಲೆ ಗೌರವ ಬಂದಿತು. ಈ ಚೇಷ್ಟೆಗಳನ್ನು ಬಿಟ್ಟೆವು. ಸಾಲದಕ್ಕೆ ಅವರು ಬಂದ ತಕ್ಷಣ ಸುವೇಗಾ ಸ್ಟ್ಯಾಂಡ್ ಹಾಕಿ ಕೊಡುವುದು, ಹೋಗುವಾಗ ಸ್ಟಾರ್ಟ್ ಮಾಡಿ ಕೊಡುವುದು ಇವೆಲ್ಲಾ ಪಶ್ಚಾತ್ತಾಪದ ಕಾರ್ಯಗಳನ್ನೂ ಮಾಡಿ ನಮ್ಮ ಪಾಪಗಳಿಂದ ವಿಮುಕ್ತಿ ಹೊಂದಿದೆವು.

-ಓಚವ

Suvega Moped/ಸುವೇಗಾ ಮೊಪೆಡ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

This is a demo store for testing purposes — no orders shall be fulfilled. Dismiss